Osée 12

Reviens à ton Dieu

1ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ. ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ. 2ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು. 3ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು, ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು; 4ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು. ಯೆಹೋವನೆಂಬ ಸೇನಾಧೀಶ್ವರನಾದ ದೇವರು ಅವನನ್ನು ಬೇತೇಲಿನಲ್ಲಿಯು ಕಂಡು ಅಲ್ಲಿ ಅವನೊಡನೆ ಮಾತನಾಡಿದನು.

5ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ. 6ಇಸ್ರಾಯೇಲೇ, ನೀನೂ ನಿನ್ನ ದೇವರ ಕಡೆಗೆ ತಿರುಗಿಕೋ; ನೀತಿ, ಪ್ರೀತಿಗಳನ್ನು ಅನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು. 7ಕಾನಾನು! ಅದರ ಕೈಯಲ್ಲಿ ಮೋಸದ ತ್ರಾಸು ಇದೆ; ಕಸಕೊಳ್ಳಬೇಕೆಂಬದೇ ಅದರ ಆಶೆ.

8ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ? 9ನೀನು ಐಗುಪ್ತ ದೇಶದಲ್ಲಿ ಇದ್ದಂದಿನಿಂದ ನಾನೇ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ಜಾತ್ರೆಯ ಕಾಲದಲ್ಲಿ ವನವಾಸಮಾಡುವಂತೆ ಗುಡಾರಗಳಲ್ಲಿ ವಾಸಿಸುವ ಗತಿಗೆ ನಿನ್ನನ್ನು ಪುನಃ ತರುವೆನು. 10ನಾನು ಪ್ರವಾದಿಗಳಿಗೆ ನುಡಿದಿದ್ದೇನೆ, ಬಹಳ ದಿವ್ಯದರ್ಶನಗಳನ್ನು ದಯಪಾಲಿಸಿದ್ದೇನೆ. ಪ್ರವಾದಿಗಳ ಮೂಲಕ ಸೂಚಕಕಾರ್ಯಗಳನ್ನು ನಡೆಸಿದ್ದೇನೆ.

11ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವುದು; ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವುದೋ? ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು. 12ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು. 13ಯೆಹೋವನು ಇಸ್ರಾಯೇಲನ್ನು ಪ್ರವಾದಿಯ ಮುಖಾಂತರ ಐಗುಪ್ತದೊಳಗಿಂದ ಪಾರುಮಾಡಿದನು; ಪ್ರವಾದಿಯ ಮೂಲಕ ಅದು ರಕ್ಷಿಸಲ್ಪಟ್ಟಿತು.

14ಎಫ್ರಾಯೀಮು ಯೆಹೋವನನ್ನು ಅತಿ ತೀಕ್ಷ್ಣವಾಗಿ ರೇಗಿಸಿದೆ, ಆದಕಾರಣ ಅದರ ಒಡೆಯನು ಅದರ ರಕ್ತಾಪರಾಧವನ್ನು ಅದರ ಮೇಲೆ ಹೊರಿಸಿ, ಅದು ಮಾಡಿದ ಅವಮಾನವನ್ನು ಅದಕ್ಕೆ ಹಿಂದಿರುಗಿಸುವನು.

Copié !
Aa