诗篇 116
我爱耶和华,因为他听了我的声音
1ಯೆಹೋವನನ್ನು ಪ್ರೀತಿಸುತ್ತೇನೆ; ಆತನು ನನ್ನ ಮೊರೆಯನ್ನು ಕೇಳುವನು. 2ಆತನು ನನ್ನ ವಿಜ್ಞಾಪನೆಗೆ ಕಿವಿಗೊಟ್ಟಿದ್ದಾನೆ; ಜೀವದಿಂದ ಇರುವವರೆಗೂ ಆತನನ್ನೇ ಪ್ರಾರ್ಥಿಸುವೆನು. 3ಮರಣಪಾಶಗಳು ನನ್ನನ್ನು ಸುತ್ತಿಕೊಂಡಿದ್ದವು; ಪಾತಾಳ ವೇದನೆಗಳು ನನ್ನನ್ನು ಹಿಡಿದಿದ್ದವು. ಚಿಂತೆಯಲ್ಲಿಯೂ, ಇಕ್ಕಟ್ಟಿನಲ್ಲಿಯೂ ಬಿದ್ದುಹೋಗಿದ್ದೆನು.
4ಆಗ ಯೆಹೋವನ ಹೆಸರನ್ನು ಹೇಳಿ, “ಯೆಹೋವನೇ, ಕೃಪೆಮಾಡಿ ನನ್ನ ಪ್ರಾಣವನ್ನು ರಕ್ಷಿಸು” ಎಂದು ಪ್ರಾರ್ಥಿಸಿದೆನು. 5ಯೆಹೋವನು ಕೃಪಾಳುವೂ, ನೀತಿವಂತನೂ ಆಗಿದ್ದಾನೆ; ನಮ್ಮ ದೇವರು ಕನಿಕರವುಳ್ಳವನು. 6ಯೆಹೋವನು ಸರಳ ಮನಸ್ಸುಳ್ಳವರನ್ನು ಕಾಪಾಡುವನು; ಕುಗ್ಗಿದವನಾದ ನನ್ನನ್ನು ರಕ್ಷಿಸಿದನು.
7ನನ್ನ ಮನವೇ, ನಿನ್ನ ವಿಶ್ರಾಂತಿಯ ನೆಲೆಗೆ ತಿರುಗು. ಯೆಹೋವನು ನಿನಗೆ ಮಹೋಪಕಾರಗಳನ್ನು ಮಾಡಿದ್ದಾನಲ್ಲಾ. 8ಯೆಹೋವನೇ, ನಾನು ಜೀವಲೋಕದಲ್ಲಿದ್ದು ನಿನಗೆ ನೀತಿಯುಳ್ಳವನಾಗಿ ನಡೆದುಕೊಳ್ಳಬೇಕೆಂದು, 9ನೀನು ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿ, ಕಣ್ಣೀರನ್ನು ನಿಲ್ಲಿಸಿ, ನನ್ನ ಪಾದಗಳನ್ನು ಎಡವದಂತೆ ಕಾದಿದ್ದೀ.
10“ನಾನು ಬಹಳವಾಗಿ ಕುಗ್ಗಿಹೋದೆ” ಎಂದು ಹೇಳಿದಾಗಲೂ, 11“ಮನುಷ್ಯರೆಲ್ಲಾ ಸುಳ್ಳುಗಾರರು” ಎಂದು ಭ್ರಾಂತಿಯಿಂದ ಹೇಳಿದಾಗಲೂ, ಭರವಸವುಳ್ಳವನಾಗಿಯೇ ಇದ್ದೆನು. 12ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
13ರಕ್ಷಣಾಪಾತ್ರೆಯನ್ನು ತೆಗೆದುಕೊಂಡು, ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 14ಯೆಹೋವನಿಗೆ ಹೊತ್ತ ಹರಕೆಗಳನ್ನು, ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು. 15ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ.
16ಯೆಹೋವನೇ, ಕರುಣಿಸು, ನಾನು ನಿನ್ನ ಸೇವಕನು; ನಿನ್ನ ದಾಸಿಯ ಮಗನೂ, ನಿನ್ನ ದಾಸನೂ ಆಗಿದ್ದೇನೆ. ನನ್ನ ಬಂಧನಗಳನ್ನು ಬಿಚ್ಚಿಬಿಟ್ಟಿದ್ದಿ. 17ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 18ಯೆರೂಸಲೇಮೇ, ನಿನ್ನ ಮಧ್ಯದಲ್ಲಿ, ಯೆಹೋವನ ಮಂದಿರದ ಅಂಗಳಗಳಲ್ಲಿ, 19ಆತನಿಗೆ ಹೊತ್ತ ಹರಕೆಗಳನ್ನು, ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು. ಯೆಹೋವನಿಗೆ ಸ್ತೋತ್ರ!