Salmi 34
Gustate e vedete quanto è buono il Signore
1ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಟಾಗ ರಚಿಸಿದ ಕೀರ್ತನೆ. ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು. 2ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು; ಇದನ್ನು ದೀನರು ಕೇಳಿ ಸಂತೋಷಿಸುವರು. 3ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.
4ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು, ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. 5ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ. 6ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು, ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.
7ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು, ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ. 8ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು. 9ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವುದಿಲ್ಲ.
10ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಒಳಿತಿಗೆ ಕೊರತೆಯಿಲ್ಲ. 11ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು. 12ದೀರ್ಘಾಯುಷ್ಯವು ಬೇಕೋ? ಬಹುದಿನ ಬದುಕಿ ಸುಖವನ್ನು ಅನುಭವಿಸಬೇಕೋ?
13ಹಾಗಾದರೆ ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ; ವಂಚನೆಯ ಮಾತುಗಳಿಗೆ ಬಿಡದೆ ತುಟಿಗಳನ್ನು ಇಟ್ಟುಕೋ. 14ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು; ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು. 15ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.
16ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು; ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು. 17ಯೆಹೋವನು ನೀತಿವಂತರ ಕೂಗನ್ನು ಕೇಳಿ, ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ. 18ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.
19ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ, ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ. 20ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ. 21ದುಷ್ಟನ ಕೆಡುಕು ಅವನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು.
22ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ. ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವುದಿಲ್ಲ.