Marco 2
La guarigione del paralitico
1ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿತ್ತು. 2ಆಗ ಬಹು ಜನರು ಅಲ್ಲಿ ಕೂಡಿಬಂದಿದ್ದರಿಂದ ಬಾಗಿಲಿನ ಬಳಿಯಲ್ಲಿಯೂ ಕೂಡ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. 3ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು; ನಾಲ್ಕು ಮಂದಿಯು ಆತನನ್ನು ಹೊತ್ತುಕೊಂಡಿದರು.
4ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. 5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. 6ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು; 7“ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು.
8ಹೀಗೆ ಆಲೋಚಿಸಿಕೊಳ್ಳುತ್ತಿದ್ದುದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ? 9ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ’ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ’ ಅನ್ನುವುದೋ? 10ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದನ್ನು ನೀವು ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ 11“ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ” ಅಂದನು.
12ಅವನು ಕೂಡಲೆ ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದನ್ನು ನೋಡಿದವರೆಲ್ಲರು ಆಶ್ಚರ್ಯಚಕಿತರಾದರು, “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ” ಇಲ್ಲವೆಂದು ಹೇಳುತ್ತಾ ದೇವರಿಗೆ ಮಹಿಮೆ ಸಲ್ಲಿಸಿದರು.
La chiamata di Levi
13ಯೇಸು ಹೊರಟು ತಿರುಗಿ ಸಮುದ್ರದ ಬಳಿಗೆ ಹೋದನು. ಜನರು ಗುಂಪಾಗಿ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶ ಮಾಡಿದನು. 14ಆತನು ಅಲ್ಲಿಂದ ಹೋಗುತ್ತಿರುವಾಗ ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು. 15ಅನಂತರ ಯೇಸುವು ಆ ಲೇವಿಯನ ಮನೆಯೊಳಗೆ ಊಟಮಾಡುತ್ತಿರುವಾಗ, ಬಹು ಮಂದಿ ಸುಂಕದವರೂ, ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡರು. ಇಂಥವರಲ್ಲಿ ಬಹು ಮಂದಿ ಯೇಸುವನ್ನು ಹಿಂಬಾಲಿಸಿದವರಾಗಿದ್ದರು.
16ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು. 17ಯೇಸು ಅದನ್ನು ಕೇಳಿ ಅವರಿಗೆ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದಾತನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
La domanda sul digiuno
18ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸ ಮಾಡುತ್ತಿದ್ದರು. ಅವರು ಆತನ ಬಳಿಗೆ ಬಂದು ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸಮಾಡುತ್ತಾರಲ್ಲಾ? “ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು. 19ಅದಕ್ಕೆ ಯೇಸು ಅವರಿಗೆ, “ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವಲ್ಲಿ ಉಪವಾಸಮಾಡುವುದುಂಟೇ? ಮದಲಿಂಗನು ತಮ್ಮ ಸಂಗಡ ಇರುವ ತನಕ ಅವರು ಉಪವಾಸ ಮಾಡಲಾರರು. 20ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆ ಕಾಲದಲ್ಲಿ ಅವರು ಉಪವಾಸ ಮಾಡುವರು.
La toppa e gli otri
21“ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. 22ಮತ್ತು ಹಳೆಯಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ, ಹಾಕಿದರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಮತ್ತು ಬುದ್ದಲಿಗಳು ಎರಡೂ ನಾಶವಾಗುವವು. ಆದುದರಿಂದ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು” ಎಂದು ಹೇಳಿದನು.
Signore del sabato
23ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು. 24ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು. 25ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ?
26ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ, 27“ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ. 28ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು.