Esodo 38

La confezione dell'altare di bronzo

1ಅವನು ದಹನ ಬಲಿಯ ಯಜ್ಞವೇದಿಯನ್ನು ಜಾಲೀಮರದಿಂದ ಕಟ್ಟಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು. 2ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಯಜ್ಞವೇದಿಯಿಂದಲೇ ಮಾಡಲ್ಪಟ್ಟಿದ್ದವು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಿದನು. 3ಯಜ್ಞವೇದಿಯ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ತೊಟ್ಟಿಗಳು, ಮುಳ್ಳುಚಮಚಗಳು, ಅಗ್ಗಿಷ್ಟಿಕೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.

4ಯಜ್ಞವೇದಿಗೆ ಹೆಣಿಗೆ ಕೆಲಸದಿಂದ ತಾಮ್ರದ ಜಾಲರಿಯನ್ನು ಮಾಡಿಸಿದನು. ಅದು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರುವಂತೆ ಹಾಕಿದನು. 5ಯಜ್ಞವೇದಿಯನ್ನು ಎತ್ತಿ ಹಿಡಿಯುವ ಕಂಬಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಲರಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿಸಿದನು. 6ಯಜ್ಞವೇದಿಯನ್ನು ಹೊರುವ ಕಂಬಗಳನ್ನು ಜಾಲೀಮರದಿಂದ ಮಾಡಿಸಿ ತಾಮ್ರದ ತಗಡುಗಳನ್ನು ಹೊದಿಸಿದನು.

7ಎರಡು ಬದಿಗಳಲ್ಲಿರುವ ಬಳೆಗಳಲ್ಲಿ ಅವುಗಳನ್ನು ಸೇರಿಸಿದನು. ಆ ಯಜ್ಞವೇದಿಯನ್ನು ಹಲಗೆಗಳಿಂದ ಬರಿದಾಗಿರುವ ಒಂದು ಪೆಟ್ಟಿಗೆಯಂತೆ ಮಾಡಿಸಿದನು.

La confezione della conca

8ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ದರ್ಪಣಗಳಿಂದ ತಾಮ್ರದ ತೊಟ್ಟಿಯನ್ನೂ, ಅದರ ಪೀಠವನ್ನೂ ಮಾಡಿಸಿದನು.

La confezione del cortile

9ಗುಡಾರಕ್ಕೆ ಅಂಗಳವನ್ನು ಮಾಡಿಸಿದನು. ಆ ಅಂಗಳದ ದಕ್ಷಿಣದಿಕ್ಕಿನಲ್ಲಿ ಇದ್ದ ಪರದೆಗಳು ನಯವಾದ ನಾರಿನ ಬಟ್ಟೆಯಿಂದ ಮಾಡಲಾಗಿತ್ತು, ನೂರುಮೊಳ ಉದ್ದವಾಗಿದ್ದವು. 10ಅವುಗಳಿಗೆ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಹಾಗೂ ಕಟ್ಟುಗಳೂ ಬೆಳ್ಳಿಯವುಗಳಾಗಿದ್ದವು. 11ಉತ್ತರದ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ಪರದೆಗಳಿದ್ದವು ಅವುಗಳಿಗೆ ಇಪ್ಪತ್ತು ಕಂಬಗಳೂ ಇಪ್ಪತ್ತು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವುಗಳಾಗಿದ್ದವು.

12ಪಶ್ಚಿಮ ಕಡೆಯಲ್ಲಿ ಐವತ್ತು ಮೊಳ ಉದ್ದವಾದ ತೆರೆಗಳಿದ್ದವು ಅವುಗಳಿಗೆ ಹತ್ತು ಕಂಬಗಳೂ ಹತ್ತು ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವಾಗಿದ್ದವು. 13ಪೂರ್ವದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಾಗಿತ್ತು. 14ಅಲ್ಲಿ ಬಾಗಿಲಿನ ಎರಡೂ ಕಡೆಗಳಲ್ಲಿಯೂ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು ಅವುಗಳಿಗೆ ಮೂರು ಮೂರು ಕಂಬಗಳೂ ಮೂರು ಮೂರು ಗದ್ದಿಗೆಕಲ್ಲುಗಳೂ ಇದ್ದವು.

15ಅಂಗಳದ ಸುತ್ತಲಿರುವ ಪರದೆಗಳೆಲ್ಲವು ನಯವಾಗಿ ಹೆಣೆದ ಹತ್ತಿಯ ಬಟ್ಟೆಯಿಂದ ಮಾಡಲ್ಪಟ್ಟಿದ್ದವು; 16ಕಂಬಗಳ ಗದ್ದಿಗೆಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ, ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಹೊದಿಸಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು. 17ಅಂಗಳದ ಬಾಗಿಲಲ್ಲಿದ್ದ ಪರದೆಯು ನಯವಾದ ಹತ್ತಿಯ ಬಟ್ಟೆಯಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಿದ ಹಾಗೆಯೇ ಮಾಡಲ್ಪಟ್ಟಿದ್ದವು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು; ಅದರ ಅಗಲವು ಅಂಗಳದ ಮಿಕ್ಕ ಪರದೆಗಳಂತೆ ಐದು ಮೊಳ.

18ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ತಾಮ್ರದ ಗದ್ದಿಗೆಕಲ್ಲುಗಳೂ ಇದ್ದವು; ಕಂಬಗಳ ಕೊಂಡಿಗಳಿಗೆ, ಕಟ್ಟುಗಳಿಗೆ ಹಾಗು ಬೋದಿಗೆಗಳಿಗೆ ಹೊದಿಸಲ್ಪಟ್ಟ ತಗಡುಗಳು ಬೆಳ್ಳಿಯವಾಗಿದ್ದವು. 19ಗುಡಾರದ ಗೂಟಗಳೂ ಅಂಗಳದ ಗೂಟಗಳೂ ತಾಮ್ರದವುಗಳಾಗಿದ್ದವು. 20ದೇವದರ್ಶನದ ಗುಡಾರವನ್ನು ಅಂದರೆ ಒಡಂಬಡಿಕೆಯ ನಿಯಮದ ಗುಡಾರವನ್ನು ಮಾಡುವುದರಲ್ಲಿ ಉಪಯೋಗಿಸಿದ ಪದಾರ್ಥಗಳ ಲೆಕ್ಕಾಚಾರ: ಮೋಶೆಯ ಅಪ್ಪಣೆಯ ಪ್ರಕಾರ ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಲೇವಿಯರ ಕೈಯಿಂದ ಲೆಕ್ಕಮಾಡಿಸಿದ ದೇವದರ್ಶನದ ಗುಡಾರದ ಖರ್ಚು ವೆಚ್ಚಗಳು.

L'inventario dei materiali

21ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿದ್ದ ಬೆಚಲೇಲನೇ ಮಾಡಿದನು. 22ಅವನ ಜೊತೆಯಲ್ಲಿ ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನು ಸೇರಿದ್ದನು; ಇವನು ಶಿಲ್ಪವಿದ್ಯೆಬಲ್ಲವನಾಗಿದ್ದನು, ಕಲಾತ್ಮಕ ಕೆಲಸವನ್ನು ಮಾಡಿಸುವವನು ಹಾಗು ಹತ್ತಿಯ ಬಟ್ಟೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲಿನಿಂದ ಕಸೂತಿ ಕೆಲಸ ಮಾಡುವವನು ಆಗಿದ್ದನು. 23ದೇವಮಂದಿರದ ಸಕಲವಿಧವಾದ ಕೆಲಸಗಳಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ಇಪ್ಪತ್ತೊಂಬತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲ್.

24ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ದೇವರ ಸೇವೆಗೆಂದು ಸಂಗ್ರಹಿಸಿದ ಬೆಳ್ಳಿಯ ತೂಕವು ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ನೂರು ತಲಾಂತು ಹಾಗು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲ್. 25ದೇವರ ಸೇವೆಗೆ ನೇಮಕವಾದ ಶೆಕೆಲಿನ ಮೇರೆಗೆ ಒಂದೊಂದು “ಬೆಕಾ” ಅಂದರೆ ಅರ್ಧ ಶೆಕೆಲ್ ಆಗಿತ್ತು. ಜನಗಣತಿಯಲ್ಲಿ ಎಣಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರು ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸುಳ್ಳವರ ಲೆಕ್ಕ ಆರು ಲಕ್ಷದ ಮೂರು ಸಾವಿರದ ಐನೂರ ಐವತ್ತು ಮಂದಿಯಾಗಿತ್ತು. 26ದೇವಮಂದಿರದ ಗದ್ದಿಗೆಕಲ್ಲುಗಳನ್ನೂ ಪರದೆಯ ಕಂಬಗಳ ಮೆಟ್ಟುವಕಲ್ಲುಗಳನ್ನೂ ಎರಕಹೊಯ್ಯುವುದರಲ್ಲಿ ಒಂದೊಂದು ಗದ್ದಿಗೆಕಲ್ಲಿಗೆ ಒಂದೊಂದು ತಲಾಂತಿನ ಮೇರೆಗೆ ನೂರು ತಲಾಂತು ಬೆಳ್ಳಿಯು ಉಪಯೋಗಿಸಲಾಯಿತು.

27ಮಿಕ್ಕ ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಕಂಬಗಳಿಗೆ ಕೊಂಡಿಗಳನ್ನೂ ಕಟ್ಟುಗಳನ್ನೂ ಮಾಡಿ ಅವುಗಳ ಅಗುಳಿಗಳಿಗೆ ತಗಡುಗಳನ್ನು ಹೊದಿಸಿದರು. 28ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕವು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾನೂರು ಶೆಕೆಲ್ ಗಳಾಗಿತ್ತು. 29ಅವುಗಳಿಂದ ದೇವದರ್ಶನದ ಗುಡಾರದ ಬಾಗಿಲಿನ ಮೆಟ್ಟುವಕಲ್ಲುಗಳನ್ನು, ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಯಜ್ಞವೇದಿಯ ಎಲ್ಲಾ ಉಪಕರಣಗಳನ್ನು, 30ಅಂಗಳದ ಗದ್ದಿಗೆಕಲ್ಲುಗಳನ್ನು, ಅಂಗಳದ ಬಾಗಿಲಿನ ಮೆಟ್ಟುವ ಕಲ್ಲುಗಳನ್ನು ಹಾಗು ಗುಡಾರದ ಮತ್ತು ಅಂಗಳದ ಎಲ್ಲಾ ಗೂಟಗಳನ್ನು ಮಾಡಿದನು.

Copiato!
Aa