1 Timoteo 4

Un avvertimento sugli ultimi tempi

1ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ. 2ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು, 3ಅವರು ವಿಶ್ವಾಸಿಗಳಿಗೆ ಮದುವೆಯಾಗಬಾರದೆಂತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ ದೇವರು ಉಂಟುಮಾಡಿದ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು.

4ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು ತಿರಸ್ಕರಿಸಬೇಕಾಗಿಲ್ಲ. 5ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.

Esercitati alla pietà

6ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ. 7ಅಜ್ಜಿ ಕಥೆಗಳನ್ನೂ ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ. 8ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು.

9ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ. 10ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ. 11ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.

12ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು. 13ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು. 14ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.

15ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು. 16ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

Copiato!
Aa