Psalms 37

Do not fret because of evildoers

1ದಾವೀದನ ಕೀರ್ತನೆ. ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ; ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ. 2ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಹಸಿರು ಸಸಿಯಂತೆ ಬಾಡಿಹೋಗುವರು. 3ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.

4ನೀನು ಯೆಹೋವನಲ್ಲಿ ಸಂತೋಷಿಸು; ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು. 5ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು. 6ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ, ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.

7ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ. 8ಕೋಪವನ್ನು ಅಡಗಿಸಿಕೋ; ರೋಷವನ್ನು ಬಿಡು. ತಳಮಳಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು. 9ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.

10ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ನಿರ್ನಾಮವಾಗಿ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವುದೇ ಇಲ್ಲ. 11ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. 12ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.

13ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ. 14ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ. 15ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು; 16ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.

17ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು. 18ಯೆಹೋವನು ನಿರ್ದೋಷಿಗಳ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವತ್ತು ಶಾಶ್ವತವಾಗಿ ನಿಲ್ಲುವುದು. 19ಅವರಿಗೆ ವಿಪತ್ಕಾಲದಲ್ಲಿಯೂ ಅಪಮಾನವಾಗುವುದಿಲ್ಲ; ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.

20ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು. 21ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು. 22ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು; ಆತನ ಶಾಪವು ಯಾರಿಗಿರುವುದೋ ಅವರು ತೆಗೆದುಹಾಕಲ್ಪಡುವರು.

23ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ. 24ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು. 25ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ, ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.

26ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು. 27ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ ದೇಶದಲ್ಲಿ ವಾಸವಾಗಿರುವಿ. 28ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.

29ನೀತಿವಂತರೋ ದೇಶವನ್ನು ಅನುಭವಿಸುವವರಾಗಿ, ಅದರಲ್ಲಿ ಶಾಶ್ವತವಾಗಿ ವಾಸಿಸುವರು. 30ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ, ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ. 31ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವುದು; ಅವನು ಜಾರುವುದೇ ಇಲ್ಲ.

32ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ. 33ಆದರೆ ಯೆಹೋವನು ಅವನನ್ನು ಅವರ ಕೈಗೆ ಸಿಕ್ಕಗೊಡಿಸುವುದಿಲ್ಲ; ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವುದಿಲ್ಲ. 34ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.

35ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿಕೊಂಡಿರುವುದನ್ನು ನೋಡಿದ್ದೆನು. 36ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ, ಅವನು ಇಲ್ಲದೆ ಹೋಗಿದ್ದನು, ಅವನನ್ನು ಹುಡುಕಿದರೂ ಸಿಕ್ಕಲಿಲ್ಲ. 37ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವುದು.

38ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವುದು. 39ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ. 40ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದುದರಿಂದ, ಆತನು ಅವರನ್ನು ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.

Copied!
Aa