Psalms 29

The voice of the Lord over the waters

1ದಾವೀದನ ಕೀರ್ತನೆ. ದೇವದೂತರುಗಳಿರಾ, ಪರಮಪ್ರಭಾವವು, ಯೆಹೋವನದೇ, ಯೆಹೋವನದೇ ಎಂದು ಹೇಳಿ ಕೊಂಡಾಡಿರಿ. 2ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ. 3ಯೆಹೋವನ ಮಹಾಧ್ವನಿಯು ಮೇಘಮಂಡಲದಲ್ಲಿ ಕೇಳಿಸುತ್ತದೆ; ಪ್ರಭಾವಸ್ವರೂಪನಾದ ದೇವರು ಗುಡುಗುತ್ತಾನೆ; ಯೆಹೋವನು ಆಕಾಶದ ಜಲರಾಶಿಗಳ ಮೇಲೆ ಇದ್ದಾನೆ.

4ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು, ಎಷ್ಟೋ ಗಂಭೀರವಾದದ್ದು. 5ಯೆಹೋವನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ; ಯೆಹೋವನು ಲೆಬನೋನ್ ಪರ್ವತದಲ್ಲಿನ ಮಹಾದೇವದಾರುಗಳನ್ನೂ ಮುರಿದುಬಿಡುತ್ತಾನೆ. 6ಲೆಬನೋನ್ ಪರ್ವತವು ಕರುವಿನೋಪಾದಿಯಲ್ಲಿಯೂ, ಸಿರ್ಯೋನ್ ಬೆಟ್ಟವು ಕಾಡುಕೋಣದ ಮರಿಯಂತೆಯೂ ಹಾರಾಡುವ ಹಾಗೆ ಮಾಡುತ್ತಾನೆ.

7ಯೆಹೋವನ ಗರ್ಜನೆಗೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ. 8ಯೆಹೋವನ ಗರ್ಜನೆಗೆ ಕಾಡು ಹೊರಳಾಡುತ್ತದೆ; ಕಾದೇಶ್ ಅರಣ್ಯವು ಕಂಪಿಸುತ್ತದೆ. 9ಯೆಹೋವನ ಗರ್ಜನೆಯು ದೇವದಾರು ಮರಗಳನ್ನು ಕದಲಿಸುತ್ತದೆ; ಕಾಡಿನ ಮರಗಳು ಬರಿದಾಗುತ್ತವೆ. ಆಗ ಆತನ ಮಂದಿರದಲ್ಲಿರುವವರೆಲ್ಲರು, “ಎಷ್ಟೋ ಪ್ರಭಾವ!” ಎನ್ನುತ್ತಾರೆ.

10ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು; ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು. 11ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.

Copied!
Aa