2 Chronicles 3

Building on Mount Moriah

1ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು. 2ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಅದನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. 3ಸೊಲೊಮೋನನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದವು ಮೊದಲಿದ್ದ ಮೊಳದ ಪ್ರಕಾರ ಅರುವತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವು ಆಗಿತ್ತು.

4ದೇವಾಲಯದ ಮುಂಭಾಗದಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ ಆಗಿತ್ತು. ಸೊಲೊಮೋನನು ಅದರ ಒಳಭಾಗವನ್ನು ಶುದ್ಧ ಬಂಗಾರದ ತಗಡಿನಿಂದ ಹೊದಿಸಿದನು.

The inside of the temple

5ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದ ಮುಚ್ಚಿ, ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಆದರ ಹಲಗೆಗಳ ಮೇಲೆ ಖರ್ಜೂರದ ಮರಗಳನ್ನೂ ಬಳ್ಳಿಗಳನ್ನೂ ಸರಪಣಿಗಳನ್ನು ಕೆತ್ತಿಸಿದನು. 6ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು. 7ಹೀಗೆ ಆಲಯದಲ್ಲಿನ ತೊಲೆಗಳನ್ನೂ, ಹೊಸ್ತಿಲುಗಳನ್ನು, ಗೋಡೆಗಳನ್ನೂ, ಬಾಗಿಲುಗಳನ್ನೂ ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.

8ಇದಲ್ಲದೆ ಅವನು ಮಹಾಪರಿಶುದ್ಧ ಸ್ಥಳವನ್ನು ಕಟ್ಟಿಸಿದನು. ಅದರ ಉದ್ದವು, ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ; ಅದರ ಅಗಲವೂ ಇಪ್ಪತ್ತು ಮೊಳವಾಗಿತ್ತು. ಅದನ್ನು ಆರುನೂರು ತಲಾಂತು ಚೊಕ್ಕ ಬಂಗಾರದಿಂದ ಹೊದಿಸಿದನು. 9ಬಂಗಾರದ ಮೊಳೆಗಳ ತೂಕ ಐವತ್ತು ತೊಲವಾಗಿತ್ತು. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.

The two cherubim

10ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿದನು; ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು. 11ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು. 12ಅದರಂತೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳ ಉದ್ದವಾಗಿದ್ದು, ಅದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು.; ಇನ್ನೊಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.

13ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದಕ್ಕೆ ಚಾಚಿಕೊಂಡಿದ್ದವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತುಕೊಂಡು, ಪರಿಶುದ್ಧ ಸ್ಥಳದ ಕಡೆಗೆ ಮುಖಮಾಡಿದ್ದವು.

The veil and the pillars

14ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು. 15ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು. 16ಸೊಲೊಮೋನನು ಗರ್ಭಗೃಹದ ಸರಪಣಿಗಳಂತೆ ಹಾರಗಳನ್ನು ಮಾಡಿಸಿ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕೆತ್ತಿಸಿ ಕಟ್ಟಿಸಿದನು.

17ಸ್ತಂಭಗಳನ್ನು ದೇವಾಲಯದ ಮುಂಭಾಗದಲ್ಲಿ, ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ “ಯಾಕೀನ್” ಎಂದೂ ಎಡಗಡೆಯಿದ್ದ ಕಂಬಕ್ಕೆ “ಬೋವಜ್” ಎಂದೂ ಹೆಸರಿಟ್ಟನು.

Copied!
Aa